iied iied
ಮುಖ ಪುಟ
line
line
line
line
line
line
line
 
videos English video kannada video
English video kannada video English video kannada video English video kannada video English video kannada video English video kannada video
This web is in Kannada, in case you have problems viewing it : Download Kannada Fonts and Set Browser Encoding to UTF8
ಆದರ್ಶ
ಕೃಷಿ ಸಂಶೋಧನೆಯ ಪ್ರಜಾತಾಂತ್ರೀಕರಣಕ್ಕಾಗಿ ರೈತ ತೀರ್ಪು
ಇದೇ ನವೆಂಬರ್ 30ರಿಂದ ಡಿಸೆಂಬರ್ 5ರವರೆಗೆ ಕರ್ನಾಟಕದಲ್ಲಿ ರೈತ ತೀರ್ಪು ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯುತ್ತಿದೆ. ಇಲ್ಲಿ ಸಾಮಾನ್ಯ ರೈತರು ಸದ್ಯದ ಕೃಷಿ ಸಂಶೋಧನೆಯ ಮಾದರಿಯ ವಿಶ್ಲೇಷಣೆ, ವಿಮರ್ಶೆ ಮಾಡುತ್ತಾರೆ; ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸುತ್ತಾರೆ; ಮಾತ್ರವಲ್ಲ, ತಮ್ಮ ಅಗತ್ಯದ ಸಂಶೋಧನೆ ಹೇಗಿರಬೇಕು ಎನ್ನುವ ತಮ್ಮ ತೀರ್ಪನ್ನು ಮಂಡಿಸುತ್ತಾರೆ. ಕಳೆದ ಐದು ದಶಕದಲ್ಲಿ ಭಾರತೀಯ ಕೃಷಿ ಸಂಶೋಧನೆಯಲ್ಲಿ ಉಂಟಾಗಿರುವ ಆತಂಕಕಾರಿ ಬೆಳವಣಿಗೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ರೈತ ತೀರ್ಪುವನ್ನು ಆದರ್ಶ-(ದಕ್ಷಿಣ ಏಷ್ಯಾದಲ್ಲಿ ಕೃಷಿ ಸಂಶೋಧನೆಯ ಪ್ರಜಾತಾಂತ್ರೀಕರಣಕ್ಕಾಗಿ ಸಮನ್ವಯ) ಸಂಯೋಜಿಸಿದೆ.

ಹಿನ್ನೆಲೆ
ಇಂದು ಕಾರ್ಪೊರೆಟ್ ಕಂಪನಿಗಳ ಅಗತ್ಯಕ್ಕೆ ತಕ್ಕ ಸಂಶೋಧನೆಗಳಲ್ಲೇ ತೊಡಗಿರುವ ನಮ್ಮ ಕೃಷಿ ಸಂಶೋಧನಾ ಸಂಸ್ಥೆಗಳು ರೈತರ ಕಾಳಜಿಗಳಿಂದ ಬಹುದೂರ ಸರಿದಿವೆ. ಸಾವಿರಾರು ವರ್ಷಗಳ ಕೃಷಿ ಪರಂಪರೆಯಲ್ಲಿ ರೈತರು ಮೈಗೂಡಿಸಿಕೊಂಡ ಅಗಾಧ ಜ್ಞಾನ ಮತ್ತು ಸಂಶೋಧನೆಗಳ ಮೇಲೆ ಇಲ್ಲಿ ಶಾಶ್ವತವಾಗಿ ಪರದೆ ಎಳೆದುಬಿಟ್ಟಿರುವುದರಿಂದ ಸಂಶೋಧನೆಗೂ ರೈತರಿಗೂ ಸಂಬಂಧವೇ ಇಲ್ಲದಂತಾಗಿದೆ. ಇಲ್ಲಿ ರೈತರಿಗಾಗಿ ಕೈಗೊಳ್ಳುವ ಸಂಶೋಧನೆಗಳು ಎಷ್ಟರ ಮಟ್ಟಿಗೆ ಗೌಪ್ಯತೆಯ ಬಿಲಗಳಲ್ಲಿ ಅಡಗಿಕೊಂಡಿರುತ್ತವೆಂದರೆ, ರೈತರು ಇವುಗಳನ್ನು ಪರಿಶೀಲಿಸುವುದಿರಲಿ, ಹತ್ತಿರ ಸುಳಿಯುವುದು ಕೂಡ ಸಾಧ್ಯವಿಲ್ಲ. ಈ ಥರದ ಗುಟ್ಟು ಗುಮಾನಿಯ ಕೃಷಿ ಸಂಶೋಧನೆಯೇ ಕಳೆದ ಐದು ದಶಕಗಳಿಂದ ಭಾರತೀಯ ಕೃಷಿಯ ಹಣೆಬರಹವನ್ನು ಬರೆಯುತ್ತಿದೆ. ಭಾರತೀಯ ಕೃಷಿ ಮುನ್ನಡೆಯ ಬಗ್ಗೆ ಬಲು ಹೆಮ್ಮೆಯಿಂದ ಹೇಳಿಕೊಳ್ಳುವ ಸಂಶೋಧನಾ ಸಂಸ್ಥೆಗಳು ಭಾರತೀಯ ಕೃಷಿಕರನ್ನು ಅತಂತ್ರ ಸ್ಥಿತಿಗೆ ತಂದು ನಿಲ್ಲಿಸಿರುವ ಹಸಿರು ಕ್ರಾಂತಿಯ ವಿಷಯದಲ್ಲಿ ಮಾತ್ರ ತುಟಿ ಬಿಚ್ಚುವುದಿಲ್ಲ. ಹಾಗೆಂದ ಮಾತ್ರಕ್ಕೆ ಸಂಶೋಧನಾ ಸಂಸ್ಥೆಗಳಲ್ಲಿ ಜನಮುಖೀ ವಿಜ್ಞಾನಿಗಳೇ ಇಲ್ಲವೆಂದಲ್ಲ. ಆದರೆ ಕಾರ್ಪೊರೆಟ್ ಗಾಳಿಯ ರಭಸಕ್ಕೆ ಮೂಲೆಗುಂಪಾಗಿರುವ ಇವರ ಕ್ರಿಯಾಶೀಲತೆ ಕಮರಿದೆ. ಅಂಥವರಿಂದ ಜನಪರ ವಿಜ್ಞಾನವನ್ನು ನಿರೀಕ್ಷಿಸುವುದಾದರೂ ಹೇಗೆ? ಇದಕ್ಕಿಂತ ಅಪಾಯದ ಬೆಳವಣಿಗೆಯೆಂದರೆ, ಖಾಸಗಿ ವಲಯ/ಕಂಪನಿಗಳು ನಡೆಸುತ್ತಿರುವ ಸ್ವತಂತ್ರ ಸಂಶೋಧನೆಗಳು. ಇವು ಸಾರ್ವಜನಿಕ ವಲಯದ ಸಂಶೋಧನಾ ಸಂಸ್ಥೆಗಳನ್ನೇ ತುಳಿದು ಲಂಗುಲಗಾಮಿಲ್ಲದೆ ಮುನ್ನುಗ್ಗುತ್ತಿವೆ.

ಇದೆಲ್ಲ 1990ರ ದಶಕದ ಜಾಗತೀಕರಣ ಶೆಕೆಯ ನೇರ ಪರಿಣಾಮ. ಪ್ರಾರಂಭದಿಂದಲೂ ಇದು ಸಾರ್ವಜನಿಕರ ಒಳಿತು ಎನ್ನುವುದನ್ನು ಕಂಪನಿಗಳ ಒಳಿತು ಎಂಬರ್ಥದಲ್ಲೇ ಹೇಳುತ್ತಿದ್ದು, ಕಾರ್ಪೊರೆಟ್ ಕಂಪನಿಗಳನ್ನು ಕೃಷಿ ಸಂಶೋಧನೆಯ ಕೇಂದ್ರಕ್ಕೆ ತರುವಲ್ಲಿ ತುಂಬಾ ಶ್ರಮಿಸಿದೆ. ಈ ಶ್ರಮದ ಫಲವಾಗಿ ಇಂದು ಬಹುತೇಕ ಎಲ್ಲಾ ಕೃಷಿ ವಿ.ವಿಗಳಲ್ಲಿನ ಸಂಶೋಧನೆಗಳು ವಿದೇಶಿ ಮತ್ತು ಭಾರತೀಯ ಕಾರ್ಪೊರೆಟ್ ಕಂಪನಿಗಳ ಹಣಸಹಾಯದಲ್ಲಿ ನಡೆಯುತ್ತಿವೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಮತ್ತು ಡಿಎಆರ್ಇಗಳಂತಹ ಭಾರತ ಸರ್ಕಾರದ ಸಂಸ್ಥೆಗಳು ಕೂಡಾ ಅಮೆರಿಕ, ಫ್ರಾನ್ಸ್, ಅರ್ಜೆಂಟೈನಾ, ಚೈನಾ, ಬ್ರೆಜಿಲ್, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿನ ಸರ್ಕಾರಗಳು, ವಿ.ವಿಗಳು ಮತ್ತು ಖಾಸಗಿ ಸಂಶೋಧನಾ ಸಂಸ್ಥೆಗಳ ಜೊತೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಒಪ್ಪಂದ ಮಾಡಿಕೊಂಡಿವೆ. ಕೃಷಿ ಜ್ಞಾನ ವಿನಿಮಯ(ಕೆಐಏ)ದಡಿ 2006ರಲ್ಲಿ ಅಮೆರಿಕದೊಡನೆ ಭಾರತ ಮಾಡಿಕೊಂಡಿರುವ ಒಪ್ಪಂದದಲ್ಲಿ ಆದ್ಯತಾ ಕ್ಷೇತ್ರಗಳನ್ನು ತೀರ್ಮಾನಿಸುವ ಮಂಡಳಿಯಲ್ಲಿ ವಾಲ್‌ಮಾರ್ಟ ಮತ್ತು ಮೊನ್ಸಾಂಟೋದಂತಹ ಕಂಪನಿಗಳಿಗೆ ಅಗ್ರಸ್ಥಾನ ಕೊಡಲಾಗಿದೆ. ಇಂದು ರಾಷ್ಟ್ರ ಮಟ್ಟದ ಬೃಹತ್ ಕೃಷಿ ವಿಸ್ತರಣಾ ಕಾರ್ಯಕ್ರಮಗಳು ವಿಶ್ವಬ್ಯಾಂಕಿನ ಹಣಸಹಾಯದಲ್ಲಿ ನಡೆಯುತ್ತಿವೆ.

ಇದೆಲ್ಲ ಆಗುವ ವೇಳೆಗೆ ಕೃಷಿ ಸಂಶೋಧನೆ ಸಾರ್ವಜನಿಕ ಹಿತಾಸಕ್ತಿಯನ್ನು ಸಂಪೂರ್ಣ ತೊರೆದು ಖಾಸಗಿ ಲಾಭದ ಗೂಡಿನಲ್ಲಿ ಬೆಚ್ಚಗೆ ಸೇರಿಬಿಟ್ಟಿದೆ. ಇಲ್ಲಿ ಕುಲಾಂತರಿ ತಂತ್ರಜ್ಞಾನ, ಜೈವಿಕ ಇಂಧನ, ಕಂಟ್ರಾಕ್ಟ್ ಕೃಷಿ/ತೋಟಗಾರಿಕೆ, ಹೈಬ್ರೀಡೀಕರಣ, ರಫ್ತು ಮಾರುಕಟ್ಟೆಗಳಿಗೇ ಒತ್ತು. ಸಾಮಾನ್ಯ ರೈತರು ಮತ್ತು ಅವರ ಬೇಸಾಯ ಪದ್ಧತಿಗಳಿಗೆ ಕುಡಿ ನೋಟದ ಕೃಪೆಯೂ ಲಭಿಸದು. ಇತ್ತೀಚೆಗೆ ಹೈದರಾಬಾದಿನ ಡೆಕ್ಕನ್ ಡೆವೆಲಪ್ಮೆಂಟ್ ಸೊಸೈಟಿ (ಡಿ.ಡಿ.ಎಸ್) ಭಾರತದ ಪ್ರಮುಖ ಕೃಷಿ ವಿ.ವಿಗಳು ಮತ್ತು ಕೃಷಿ ಸಂಶೋಧನೆಯಲ್ಲಿ ಭಾರತ ಸರ್ಕಾರದ ಪ್ರಧಾನ ಅಂಗವಾದ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು(ಐಸಿಎಆರ್)ಗಳಲ್ಲಿ ಕೈಗೊಳ್ಳಲಾಗುತ್ತಿರುವ ಸಂಶೋಧನೆಗಳು ಎತ್ತ ನಡೆದಿವೆ ಎಂದು ಪರಿಶೀಲಿಸಲು ಒಂದು ಅಧ್ಯಯನ ನಡೆಸಿ ದಾಖಲೆಯನ್ನು ಹೊರತಂದಿತು. ಮುಂಬರುವ ಎರಡು ದಶಕಗಳಲ್ಲಿ ಬಯೋಟೆಕ್ನಾಲಜಿ ಮತ್ತು ಜೆನೆಟಿಕ್ ಇಂಜಿನಿಯರಿಂಗ್ಗಳೇ ಭಾರತೀಯ ಕೃಷಿ ರಂಗವನ್ನು ಮುನ್ನಡೆಸುವ ಇಂಜಿನುಗಳು ಎಂದು ಪರಿಗಣಿಸಿ ಸಂಶೋಧನೆಗಳನ್ನು ಆ ದಿಕ್ಕಿಗೆ ಹೊರಳಿಸುತ್ತಿರುವ ತೀರ ಆತಂಕಕಾರೀ ವಿಚಾರ ಈ ಅಧ್ಯಯನದಿಂದ ಬೆಳಕಿಗೆ ಬಂದಿತು. ಕೃಷಿ ಸಂಶೋಧನೆಯ ಫಲಿತಾಂಶಗಳು ಇಡೀ ಬೇಸಾಯ ಚಕ್ರವನ್ನೇ ನಿಯಂತ್ರಿಸುವಾಗ ಇದು ಸಾರ್ವಜನಿಕ ಹಿತಾಸಕ್ತಿಯ ಹೊಣೆಗಾರಿಕೆಯಿಂದ ಹೀಗೆ ತಪ್ಪಿಸಿಕೊಳ್ಳುತ್ತಿರುವುದಕ್ಕೆ ಯಾರನ್ನು ಹೊಣೆಗಾರರಾಗಿಸಬೇಕು?

ಯಾರು ತಜ್ಞರು?
ಇದೆಲ್ಲ ಕಣ್ಣಮುಂದೆ ನಡೆಯುತ್ತಾ ಕೃಷಿ ಸಂಶೋಧನೆಯ ಕಾಲ್ತುಳಿತದಲ್ಲಿ ರೈತರು ನಲುಗುತ್ತಿದ್ದರೂ ಈ ದೇಶದ ಪ್ರಜೆಗಳಾದ ನಾವು ಅಸಹಾಯಕರಂತೆ ನೋಡುತ್ತಾ ಏನೊಂದನ್ನೂ ಪ್ರಶ್ನಿಸದಂತಿದ್ದೇವೆಯೇ? ಎಲ್ಲ ಆಡಳಿತ ಯಂತ್ರಗಳಲ್ಲೂ ಪ್ರಜಾತಾಂತ್ರಿಕತೆಗೆ ಒತ್ತಾಯಿಸುತ್ತಿರುವ ನಾಗರಿಕ ಸಮಾಜ ಸಂಘಟನೆಗಳು ಕೃಷಿ ಸಂಶೋಧನೆಯ ವಿಚಾರದಲ್ಲಿ ಮೌನತಾಳಿವೆಯೇ? ಎಂದು ಕೇಳಿಕೊಳ್ಳ ಬೇಕಾಗುತ್ತದೆ. ಆಹಾರ ಸಾರ್ವಭೌಮತ್ವ, ಭೂಮಿ, ಬೀಜ, ಆಹಾರ ಉತ್ಪಾದನೆ, ಜ್ಞಾನ ಇತ್ಯಾದಿಗಳನ್ನು ಮರಳಿ ಪಡೆಯುವಲ್ಲಿ ಎತ್ತಿದ ಧ್ವನಿ ಸಂಶೋಧನೆಯನ್ನು ಮರಳಿ ಪಡೆಯುವ ವಿಚಾರದಲ್ಲಿ ಏಕೆ ಕೇಳಿಬರುತ್ತಿಲ್ಲ? ಪ್ರಾಯಷಃ, ಕೃಷಿ ಸಂಶೋಧನೆ ಬಾರೀ ಟೆಕ್ನಿಕಲ್ ವಿಷಯವಾಗಿದ್ದು ಇದನ್ನು ತಜ್ಞರು ಮಾತ್ರ ನಿರ್ವಹಿಸಲು ಸಾಧ್ಯ, ತಜ್ಞರಲ್ಲದ ಸಾಮಾನ್ಯ ಜನಕ್ಕೆ ಇದರಲ್ಲಿ ಯಾವ ಪಾತ್ರವೂ ಇಲ್ಲ್ಲ ಎಂಬ ಭಾವನೆಯೇ? ದುರಂತವೆಂದರೆ, ಸಾವಿರಾರು ವರ್ಷಗಳ ಜ್ಞಾನ ಪರಂಪರೆ ಹೊಂದಿ ಕೃಷಿ ವಿಜ್ಞಾನಕ್ಕೆ ನೂರಾರು ವಿಷಯಗಳನ್ನು ಕಲಿಸಬಲ್ಲ ರೈತ ಸಮುದಾಯ ಕೂಡ ಈ ತಜ್ಞರಲ್ಲದ ಸಾಮಾನ್ಯ ಜನರಲ್ಲಿ ಸೇರಿಹೋಗಿದೆ. ದಿನನಿತ್ಯವೂ ಬೇಸಾಯದ ವಿವರಗಳೊಟ್ಟಿಗೆ ಕೆಲಸ ಮಾಡುತ್ತಾ ನಿರಂತರ ಸಂಶೋಧನೆಯಲ್ಲಿ ತೊಡಗಿರುವ ರೈತರು ತಜ್ಞರಲ್ಲ, ಅಲಸಂದೆ ಮತ್ತು ತೊಗರಿ ಗಿಡಗಳ ನಡುವಿನ ವ್ಯತ್ಯಾಸ ಕಂಡುಹಿಡಿಯಲಾರದ ಡಾ|| ಕಸ್ತೂರಿ ರಂಗನ್ ಪ್ರಿಸಿಷನ್ ಪಾರ್ಮಿಂಗ್ (ನಿಖರ ಕೃಷಿ) ಬಗ್ಗೆ ಸಲಹೆ ನೀಡಬಲ್ಲ ತಜ್ಞರು ಎಂದು ನಾವೂ ನಂಬಿಬಿಟ್ಟಿದ್ದೇವೆಯೇ?

ಕೃಷಿ ಸಂಶೋಧನೆಯ ಪ್ರಜಾತಾಂತ್ರೀಕರಣದ ಚಿಂತನೆ
ಈಗ ತಡವಾಗಿಯಾದರೂ ಏಷ್ಯದಾದ್ಯಂತ ನಾಗರಿಕ ಸಮಾಜ ಸಂಘಟನೆಗಳು ರೈತ-ಮುಂದಾಳತ್ವದ ಸಂಶೋಧನೆಯ ವಿಚಾರದಲ್ಲಿ ಚಿಂತನೆ, ಸಂವಾದ, ಚರ್ಚೆಗಳನ್ನು ಪ್ರಾರಂಭಿಸಿವೆ. ಈ ನಿಟ್ಟಿನಲ್ಲಿ ಎಫ್ಎಒ, ವಿಶ್ವ ಬ್ಯಾಂಕ್, ಯುಎನ್ಡಿಪಿ, ಯುಎನ್ಇಪಿ, ಯುನೆಸ್ಕೋ, ವಿಶ್ವ ಆರೋಗ್ಯ ಸಂಸ್ಥೆಯಂತಹ ಜಾಗತಿಕ ಮಟ್ಟದ ಪ್ರಮುಖ ಸಂಸ್ಥೆಗಳು ಐಎಎಎಸ್ಟಿಡಿ(ಇಂಟರ್ ನ್ಯಾಷನಲ್ ಅಸೆಸ್ಮೆಂಟ್ ಆಫ್ ಅಗ್ರಿಕಲ್ಚರ್ ಸೈನ್ಸ್ ಅಂಡ್ ಟೆಕ್ನಾಲಜಿ ಫಾರ್ ಡೆವೆಲಪ್ಮೆಂಟ್) ಎಂಬ ಪ್ರಕಲ್ಪನೆಯನ್ನು ಹುಟ್ಟುಹಾಕಿದೆ. ಜಗತ್ತಿನಾದ್ಯಂತ 400 ವಿಜ್ಞಾನಿಗಳು, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ವಿದ್ವಾಂಸರು ಇದರ ಭಾಗವಾಗಿದ್ದಾರೆ. ಕೃಷಿ ಸಂಶೋಧನೆಯು ಕಾರ್ಪೊರೆಟ್ ಹಿಡಿತದಲ್ಲಿ ಸಿಕ್ಕಿ ರೈತರ ಪರಂಪರಾಗತ ಜ್ಞಾನ ವ್ಯವಸ್ಥೆಯನ್ನು ಕಡೆಗಣಿಸಿರುವುದರಿಂದಲೇ ಈ ರಂಗದಲ್ಲಿ ಪ್ರಗತಿ ಸಾಧ್ಯವಾಗುತ್ತಿಲ್ಲ, ಹಸಿರುಕ್ರಾಂತಿ ಕೃಷಿ ಮಾದರಿಯಲ್ಲಿ ಬಾಹ್ಯ ಒಳಸುರಿಗಳ ಮೇಲೆ ಅವಲಂಭನೆ ಸೃಷ್ಟಿಸಿ ಅದನ್ನು ಸಾಂಸ್ಥೀಕರಿಸಿದ್ದೇ ಈ ಎಲ್ಲ ದುರಂತಗಳಿಗೆ ಕಾರಣ, ಹೀಗಾಗಿ ಕೃಷಿ ಸಂಶೋಧನೆ ಮತ್ತು ರೈತರ ಜ್ಞಾನಗಳನ್ನು ನೋಡುವ ದೃಷ್ಟಿಕೋನದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು ಎಂದು ಐಎಎಎಸ್ಟಿಡಿ ವರದಿ ಪ್ರತಿಪಾದಿಸಿದೆ. ಜಗತ್ತಿನಾದ್ಯಂತ ಕೃಷಿ ಸಂಶೋಧನೆಗಳು ರೈತರಿಂದ ವಿಮುಖಗೊಳ್ಳುತ್ತಿರುವ ಗಂಭೀರ ಮಿತಿಗಳನ್ನು ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಅಧಿಕೃತವಾಗಿ ಒಪ್ಪಿಕೊಂಡ ಉದಾಹರಣೆ ಇದು. ಆದಾಗ್ಯೂ ಈ ಇಡೀ ಪ್ರಕ್ರಿಯೆಯಲ್ಲಿ ಸಣ್ಣ, ಅತಿಸಣ್ಣ, ಸಾಮಾನ್ಯ ರೈತರು, ಮೂಲ ನಿವಾಸಿಗಳು, ಕೃಷಿ ಕಾರ್ಮಿಕರು ತಮಗೆ ಎಂತಹ ಕೃಷಿ ಮತ್ತು ಅಹಾರ ಸಂಶೋಧನೆ ಬೇಕು ಎಂದು ಹೇಳುವ ಸಣ್ಣ ಅವಕಾಶ ಕೂಡ ಸಿಗದೇ ಹೋಗಿರುವುದು ಇಲ್ಲಿನ ದೊಡ್ಡ ಮಿತಿ. ಐಎಎಎಸ್ಟಿಡಿ ಇನ್ನು ಮುಂದೆ ವಿಶ್ವ ಬ್ಯಾಂಕ್ ಮತ್ತು ವಿಶ್ವ ಸಂಸ್ಥೆಯ ಏಜೆನ್ಸಿಗಳ ಕೃಷಿ ಸಂಶೋಧನೆ ಮತ್ತು ಹೂಡಿಕೆಗಳಿಗೆ ಮಾರ್ಗದರ್ಶಿಕೆಯಾಗಲಿದೆ ಎನ್ನುವ ಹಿನ್ನೆಲೆಯಲ್ಲಿ ಈ ಮಿತಿ ಮತ್ತಷ್ಟು ಗಂಭೀರವಾಗುತ್ತದೆ.

ಭಾರತೀಯ ಸನ್ನಿವೇಶ ಕರ್ನಾಟಕದಲ್ಲಿ ರೈತ ತೀರ್ಪು
ಹೀಗೆ ಸಾಂಪ್ರದಾಯಕ ಕೃಷಿ ಸಂಶೋಧನೆ ಮಾತ್ರವಲ್ಲ, ಅದರ ಪರ್ಯಾಯ ಚಿಂತನೆಗಳಲ್ಲೂ ಗಂಭೀರ ಮಿತಿಗಳಿರುವುದನ್ನು ಕಂಡುಕೊಂಡು ಜಗತ್ತಿನಾದ್ಯಂತ ನಾಗರಿಕ ಸಮಾಜ ಗುಂಪುಗಳು ಸಾರ್ವಜನಿಕ ಚರ್ಚೆ ಪ್ರಾರಂಭಿಸಿದ ಫಲವಾಗಿ ಕೃಷಿ ಸಂಶೋಧನೆಯ ಪ್ರಜಾತಾಂತ್ರೀಕರಣ ಎನ್ನುವ ಆಂದೋಲನ ಪ್ರಾರಂಭವಾಯಿತು. ಕೃಷಿ ಕ್ಷೇತ್ರದ 70%ಕ್ಕೂ ಹೆಚ್ಚಿರುವ ಸಣ್ಣ ಅತಿಸಣ್ಣ, ಮಳೆಯಾಶ್ರಿತ, ದಲಿತ, ಆದಿವಾಸಿ, ಮಹಿಳಾ ರೈತರ ಕೊಡುಗೆಯನ್ನು ಎತ್ತಿಹಿಡಿದು ಕೃಷಿ ಸಂಶೋಧನೆಯನ್ನು ರೂಪಿಸುವಲ್ಲಿ ಇವರು ಮುಂಚೂಣಿಯಲ್ಲಿರಬೇಕೆಂದು ಇಲ್ಲಿ ಒತ್ತಿ ಹೇಳಲಾಯಿತು. ಜಾಗತಿಕವಾಗಿ ಈ ಆಂದೋಲನವನ್ನು ಇಂಗ್ಲೆಂಡ್ ಮೂಲದ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಎನ್ವಿರಾನ್ಮೆಂಟ್ ಅಂಡ್ ಡೆವೆಲಪ್ಮೆಂಟ್ [ಇಆ] ಮುನ್ನಡೆಸುತ್ತಿದೆ. ಲ್ಯಾಟಿನ್ ಅಮೆರಿಕದ ಪೆರು-ಬೊಲಿವಿಯಾ; ಪಶ್ಚಿಮ ಆಫ್ರಿಕಾದ ಮಾಲಿ-ಬುರ್ಕಿನ, ಫಾಸೊ-ಬೆನಿನ್; ಉತ್ತರ ಏಷಿಯಾದ ಇರಾನ್; ದಕ್ಷಿಣ ಏಷಿಯಾದ ಭಾರತ-ನೇಪಾಳ-ಶ್ರೀಲಂಕಾಗಳಲ್ಲಿ ಇದು ಕಾರ್ಯಶೀಲವಾಗಿದೆ.
ದಕ್ಷಿಣ ಏಷ್ಯಾದಲ್ಲಿ ಇದನ್ನು ಆದರ್ಶ ಎಂದು ಕರೆಯಲಾಗಿದ್ದು, ಇದರಡಿ ನೇಪಾಳ, ಭಾರತ ಹಾಗೂ ಶ್ರೀಲಂಕಾ ದೇಶಗಳಲ್ಲಿ ಸ್ಥಳೀಯ ಸನ್ನಿವೇಶಕ್ಕನುಗುಣವಾಗಿ ರೈತ ತೀರ್ಪು ಕಾರ್ಯಕ್ರಮಗಳು ನಡೆಯುತ್ತಿವೆ. ಇದರ ಜೊತೆಗೆ ರೈತ-ವಿಜ್ಞಾನಿ ಮುಖಾಮುಖಿ, ಮಾಧ್ಯಮ ಮತ್ತು ಪಾಲಿಸಿ ಸಂವಾದಗಳು, ರೈತ ಸಂಶೋಧನೆಗಳ ಪ್ರಸರಣ ಮುಂತಾದವೂ ನಡೆಯುತ್ತಿವೆ. ಭಾರತದಲ್ಲಿ ಇದರ ಸಂಯೋಜನೆಯನ್ನು ಹೈದ್ರಾಬಾದ್ ಮೂಲದ ಡೆಕ್ಕನ್ ಡೆವೆಲಪ್ಮೆಂಟ್ ಸೊಸೈಟಿ(ಡಿಡಿಎಸ್) ಮಾಡುತ್ತಿದೆ.

ಭಾರತದಲ್ಲಿ ರೈತತೀರ್ಪು ಕಾರ್ಯಕ್ರಮ ಇದೀಗ ಕರ್ನಾಟಕದಲ್ಲಿ ನಡೆಯುತ್ತಿದೆ. ಈ ಸಂಬಂಧದ ಪ್ರಕ್ರಿಯೆಗಳು ಕಳೆದ ಆರು ತಿಂಗಳುಗಳಿಂದ ನಡೆಯುತ್ತಿದೆ. ರಾಜ್ಯದ ಕೃಷಿ ಸಂಘಟಣೆಗಳು, ವಿಜ್ಞಾನಿಗಳು, ಗ್ರಾಹಕ ಸಂಘಟನೆಗಳು, ನಾಗರಿಕ ಸಮಾಜ ಸಂಘಟನೆಗಳ ಪ್ರತಿನಿಧಿಗಳು ಈ ಪ್ರಕ್ರಿಯೆಯನ್ನು ಮುನ್ನಡೆಸುತ್ತಿದ್ದು 15 ಸದಸ್ಯರನ್ನೊಳಗೊಂಡ ಕರ್ನಾಟಕದ ಸ್ಟೀರಿಂಗ್ ಕಮಿಟಿಯ ರಚನೆಯಾಗಿದೆ. ಹೈದ್ರಾಬಾದಿನ ಡೆಕ್ಕನ್ ಡೆವೆಲಪ್ಮೆಂಟ್ ಸೊಸೈಟಿ(ಡಿ.ಡಿ.ಎಸ್)ಯ ಶ್ರೀ ಪಿ.ವಿ ಸತೀಶ್ ಅವರು ಸಂಚಾಲಕರಾಗಿರುವ ಆದರ್ಶವನ್ನು ಕರ್ನಾಟಕದಲ್ಲಿ ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ ಅಂಡ್ ಯಾಕ್ಷನ್(ಇಕ್ರಾ), ಬೆಂಗಳೂರು; ಅಪ್ಪಿಕೋ ಚಳವಳಿ, ಸಿರಸಿ; ಹಿತ್ತಿಲಗಿಡ, ಬೆಂಗಳೂರು ಮತ್ತು ಕೃಷಿ ಮಾಧ್ಯಮ ಕೇಂದ್ರ, ಧಾರವಾಡ ಒಟ್ಟಾಗಿ ಸಂಯೋಜನೆ ಮಾಡುತ್ತಿವೆ.

ರೈತ ತೀರ್ಪುವಿನ ಕೇಂದ್ರವೇ ತೀರ್ಪುಗಾರರ ಮಂಡಳಿ. 30 ಮಂದಿಯನ್ನು ಒಳಗೊಂಡ ಈ ಮಂಡಳಿಯಲ್ಲಿ 20 ಮಂದಿ ಮಳೆಯಾಶ್ರಿತ, ಸಣ್ಣ- ಅತಿಸಣ್ಣ, ದಲಿತ, ಗಿರಿಜನ, ಮಹಿಳಾ ರೈತರು ಮತ್ತು ಕಾರ್ಮಿಕರಿದ್ದು ಉಳಿದ ಹತ್ತು ಜನ ಸಾಮಾನ್ಯ ರೈತರು ಮತ್ತು ಗ್ರಾಹಕರಿರುತ್ತಾರೆ. ರೈತರ ನ್ಯಾಯ ಮಂಡಳಿಯ ಆಯ್ಕೆ ಮಾಡುವಾಗ ನಾಮಪತ್ರದ ಒಂದು ಮಹಾಪೂರವನ್ನೇ ಸೃಷ್ಟಿಸಲಾಯಿತು. ಎರಡು ಸುತ್ತಿನ ಆಯ್ಕೆಯ ನಂತರ 175 ಮಂದಿಯ ಪಟ್ಟಿಯನ್ನು ಹೊತ್ತ ಮಂಗಳೂರಿನ ರೋಶನಿ ನಿಲಯ- ಸ್ಕೂಲ್ ಆಫ್ ಸೋಷಿಯಲ್ ಸೈನ್ಸಸ್ನ ವಿದ್ಯಾರ್ಥಿಗಳು ಕರ್ನಾಟಕದ 25 ಜಿಲ್ಲೆಗಳಲ್ಲಿ ಸುತ್ತಾಡಿ ಅತ್ಯಂತ ಸೂಕ್ತರಾದ 30 ಜನರನ್ನು ಆಯ್ಕೆ ಮಾಡಲು ಸಹಾಯ ಮಾಡಿದರು.

ಈ 30 ಜನರ ನ್ಯಾಯ ಮಂಡಳಿಯ ಮುಂದೆ 4 ದಿನಗಳ ಕಾಲ ವಿವಿಧ ವಾದಿಗಳು ತಮ್ಮ ವಾದ ಮಂಡಿಸುತ್ತಾರೆ. ಕೃಷಿ ವಿ.ವಿಗಳ ವಿಜ್ಞಾನಿಗಳು, ಕಾರ್ಪೊರೆಟ್ ವಲಯದ ಪ್ರತಿನಿಧಿಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ನಿರ್ದೇಶಕರು, ಸಮಾಜ ವಿಜ್ಞಾನಿಗಳು, ನಾಗರೀಕ ಸಮಾಜದ ಪ್ರತಿನಿಧಿಗಳು, ರೈತ ಸಂಘಟನೆಗಳ ಪ್ರತಿನಿಧಿಗಳು; ಗ್ರಾಹಕ ಸಂಘಟನೆಯ ಪ್ರತಿನಿಧಿಗಳು; ದನಗಾಹಿ ಸಂಘಟನೆಯ ಪ್ರತಿನಿಧಿಗಳನ್ನೊಳಗೊಂಡಂತೆ 12 ಮಂದಿ ವಾದಿಗಳನ್ನು ಈಗಾಗಲೇ ಗೊತ್ತುಪಡಿಸಲಾಗಿದೆ. ನ್ಯಾಯ ಮಂಡಳಿಯು ಈ ಎಲ್ಲಾ ವಾದಿಗಳ ವಿಚಾರಗಳನ್ನು ಆಲಿಸಿ, ಪರಿಶೀಲಿಸಿ, ಚರ್ಚಿಸಿ ಕೊನೆಯ ದಿನ ಸಾರ್ವಜನಿಕವಾಗಿ ತನ್ನ ತೀರ್ಪನ್ನು ನೀಡುತ್ತದೆ.

ಇಡೀ ಪ್ರಕ್ರಿಯೆ ವಸ್ತುನಿಷ್ಟವಾಗಿ, ಪ್ರಜಾತಾಂತ್ರೀಯ ಮೌಲ್ಯಗಳಿಗೆ ಬದ್ಧವಾಗಿ ನಡೆಯುವಂತೆ ನೋಡಿಕೊಳ್ಳಲು ಜಸ್ಟಿಸ್ ಎಂ.ಎನ್. ವೆಂಕಟಾಚಲಯ್ಯನವರ ಅಧ್ಯಕ್ಷತೆಯ ವೀಕ್ಷಣ ಸಮಿತಿ ಇದ್ದು ಇದರಲ್ಲಿ ಡಾ|| ಎಚ್. ಸುದರ್ಶನ್, ಬಿ.ಟಿ ಲಲಿತಾ ನಾಯಕ್, ಹೇಮಲತಾ ಮಹಿಷಿ, ಡಾ|| ಎಲ್. ಹನುಮಂತಯ್ಯ, ಡಾ|| ಸಿ. ದ್ವಾರಕಿನಾಥ್, ಶ್ರೀ ಕೆ.ಆರ್. ವೇಣುಗೋಪಾಲ್, ಡಾ|| ಗೋಪಾಲ್ ಖಾಡೆಕುಡಿ ಮುಂತಾದವರಿದ್ದಾರೆ.

ನ್ಯಾಯಮಂಡಳಿ ನೀಡಿದ ಈ ತೀರ್ಪು ಮುಂದಿನ ದಿನಗಳಲ್ಲಿ ಕೃಷಿ ಸಂಶೋಧನೆ ಮೂಲೆಗುಂಪಾಗಿಸಿರುವ ರೈತರು ಮತ್ತು ಕೃಷಿಪದ್ಧತಿಗಳ ಬಗ್ಗೆ ಹೊಸ ಚಿಂತನೆಯನ್ನು ಹುಟ್ಟು ಹಾಕುವಲ್ಲಿ, ಕೃಷಿ ಸಂಶೋಧನೆಯ ದಿಕ್ಕನ್ನು ಬದಲಿಸುವಲ್ಲಿ ಮಹತ್ವದ್ದಾಗಿರುತ್ತದೆ. ಕೃಷಿ ಸಂಶೋಧನೆಯನ್ನು ಕಾರ್ಪೊರೆಟ್ ಹಿಡಿತದಿಂದ ಪಾರುಮಾಡಿ ರೈತ ಸಮುದಾಯಗಳಿಗೆ ಮರಳಿಸಬೇಕೆನ್ನುವ ಆದರ್ಶ ಆಶಯಕ್ಕೆ ರೈತ ತೀರ್ಪು ಒಂದು ಮೈಲಿಗಲ್ಲಾಗಲಿದೆ.

-ವಿ. ಗಾಯತ್ರಿ